ಧೂಮಪಾನಿಗಳು ಮರುಕಳಿಸುವಂತಹ ತೀವ್ರ ರೀತಿಯ ಹಲವಾರು ರೋಗಗಳನ್ನು ಹೊತ್ತು ತರುವ ಜೀವಂತ ಬ್ಯಾಕ್ಟೀರಿಯಾಗಳನ್ನೇ ಒಳಕ್ಕೆ ಎಳೆದುಕೊಳ್ಳುತ್ತಾರೆ ಎಂದು ಅಮೆರಿಕನ್ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
ವಾಷಿಂಗ್ಟನ್ (ಪಿಟಿಐ): ಧೂಮಪಾನವನ್ನು ಯಾಕೆ ಬಿಟ್ಟು ಬಿಡಬೇಕು ಎಂದು ಕೇಳುವವರಿಗೆ ಉತ್ತರಿಸಲು ಇದೀಗ ಇನ್ನೊಂದು ಕಾರಣ ಲಭ್ಯವಾಗಿದೆ. ಧೂಮಪಾನಿಗಳು ಮರುಕಳಿಸುವಂತಹ ತೀವ್ರ ರೀತಿಯ ಹಲವಾರು ರೋಗಗಳನ್ನು ಹೊತ್ತು ತರುವ ಜೀವಂತ ಬ್ಯಾಕ್ಟೀರಿಯಾಗಳನ್ನೇ ಒಳಕ್ಕೆ ಎಳೆದುಕೊಳ್ಳುತ್ತಾರೆ ಎಂದು ಅಮೆರಿಕನ್ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
ಶ್ವಾಸಕೋಶದ ಕಾಯಿಲೆಗಳು ಮತ್ತು ಉಸಿರಾಟದ ಸೋಂಕುಗಳನ್ನು ಉಂಟುಮಾಡುವ ಸೂಕ್ಷ್ಮಾಣುಗಳು ಸೇರಿದಂತೆ ನೂರಾರು ಬಗೆಯ ಬ್ಯಾಕ್ಟೀರಿಯಾ ತಳಿಗಳನ್ನೇ ಸಿಗರೇಟುಗಳು ಒಳಗೊಂಡಿರುತ್ತವೆ ಎಂದು ಮೇರಿಲ್ಯಾಂಡ್ ವಿಶ್ವ ವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.
ಈ ಹಿಂದೆ ಸಂಶೋಧಕರು ಸಿಗರೇಟುಗಳಲ್ಲಿನ ತಂಬಾಕು ಸುಡುವ ಪರಿಣಾಮವಾಗಿ ಉಂಟಾಗುವ ರಾಸಾಯನಿಕಗಳ ಪರಿಣಾಮ ಬಗ್ಗೆ ಬೆಳಕು ಚೆಲ್ಲಿದ್ದರು. ಆದರೆ ಹೊಸ ಸಂಶೋಧನೆಯು ತಂಬಾಕಿನಲ್ಲಿನ ಬ್ಯಾಕ್ಟೀರಿಯಾಗಳ ಬಹುತೇಕ ಸಂಪೂರ್ಣ ಚಿತ್ರಣವನ್ನೇ ಹೊರಗೆಡವಿದೆ. ಈ ಸೂಕ್ಷ್ಮಾಣುಗಳು ಸೋಂಕು ಮತ್ತು ರೋಗಕ್ಕೆ ಇನ್ನೊಂದು ಮೂಲವಾಗುವ ಎಲ್ಲ ಸಾಮರ್ಥ್ಯವನ್ನೂ ಹೊಂದುವ ಸಾಧ್ಯತೆ ಇದೆ ಎಂದೂ ಈ ಸಂಶೋಧನೆ ಬಹಿರಂಗ ಪಡಿಸಿದೆ.
'ಮಾರುಕಟ್ಟೆಗಳಲ್ಲಿ ಲಭಿಸುವ ಸಿಗರೇಟುಗಳ ಸೂಕ್ಷ್ಮಾಣು ವೈವಿಧ್ಯತೆಗಳ ಬಗ್ಗೆ ಅಧ್ಯಯನ ಮಾಡುವುದು ಒಂದು ಹುಚ್ಚಾಟದ ಯೋಚನೆ ಎಂದಷ್ಟೇ ನಾವು ಭಾವಿಸಿದ್ದೆವು' ಎಂದು ಸಂಶೋಧನಾ ತಂಡದ ಮುಖ್ಯಸ್ಥ ಅಮಿ ಸಪ್ಕೋಟಾ ನುಡಿದರು.
ಸೌಜನ್ಯ: ಪ್ರಜಾವಾಣಿ